. ಮನೆ-ಮನೆಗೆ ತೆರಳಿ ವೋಟರ್ ಸ್ಲಿಪ್ ವಿತರಿಸಿದ ಜಿಲ್ಲಾ ಪಂಚಾಯತ್ ಸಿ.ಇ.ಓ
ಕಲಬುರಗಿ,ಮೇ.1(ಕ.ವಾ) ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಮತದಾನ ದಿನ, ಸಮಯ, ಮತಗಟ್ಟೆ ವಿಳಾಸ ವಿವರ ಇರುವ ವೋಟರ್ ಸ್ಲಿಪ್ ಮತ್ತು ವೋಟರ್ ಗೈಡ್ ಗಳನ್ನು ವಿತರಣೆ ಮಾಡುವ ಕಾರ್ಯ ನಿರಂತರವಾಗಿ ಸಾಗಿದ್ದು, ಬುಧವಾರ ಜಿಲ್ಲಾ ಪಂಚಾಯತ್ ಸಿ.ಇ.ಓ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ ಭಂವರ್ ಸಿಂಗ್ ಮೀನಾ ಅವರು ಜೇವರ್ಗಿ ತಾಲೂಕಿನಲ್ಲಿ ಮತದಾರರಿಗೆ ವೋಟರ್ ಸ್ಲಿಪ್ ವಿತರಿಸಿದರು.
ಜಿಲ್ಲೆಯ ಜೇವರ್ಗಿ ತಾಲೂಕಿನ ಹರವಾಳ ಗ್ರಾಮದಲ್ಲಿ ಅತಿ ಕಡಿಮೆ ಮತದಾನವಾಗಿರುವ ಮತಗಟ್ಟೆ ಸಂಖ್ಯೆ 52ರ ವ್ಯಾಪ್ತಿಯ ವಿವಿಧ ಮನೆಗಳಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಸಿ.ಇ.ಓ ಅವರು ಮತದಾರರಿಗೆ ಮಾಹಿತಿ ಪತ್ರ ಹಾಗೂ ವೋಟರ್ ಸ್ಲಿಪ್ ವಿತರಿಸಿ ಬರುವ ಮೇ 7 ರಂದು ತಪ್ಪದೆ ಮತದಾನ ಮಾಡುವಂತೆ ಕೇಳಿಕೊಂಡರು.
ಪ್ರತಿಯೊಬ್ಬರಿಗೆ ಸಂವಿಧಾನಬದ್ಧವಾಗಿ ಮತದ ಹಕ್ಕು ನೀಡಲಾಗಿದೆ. ಉತ್ತಮ ಅಭ್ಯರ್ಥಿಗಳನ್ನು ಚುನಾಯಿಸುವ ಅಧಿಕಾರ ಮತದಾರರಲ್ಲಿದ್ದು, ಈ ಅಧಿಕಾರದಿಂದ ವಿಮುಖರಾಗಬಾರದು ಎಂದು ಅವರು ಕರೆ ನೀಡಿದರು.





