ಜಾಗತಿಕ ಸೆಮಿಕಂಡಕ್ಟರ್ ಕ್ಷೇತ್ರದ ತಂತ್ರಜ್ಞರ ಅಗತ್ಯವನ್ನು ಕರ್ನಾಟಕ ಮತ್ತು ಪೆನಾಂಗ್ ಜಂಟಿಯಾಗಿ ಈಡೇರಿಸಲು ಸಾಧ್ಯ: ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ಅಭಿಮತ • ಡೀಪ್ಟೆಕ್, ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಯೋಗ ಕುರಿತು ಫಲಪ್ರದ ಚರ್ಚೆ • ಪ್ರತಿಭಾನ್ವಿತರ ವಿನಿಮಯ ಕಾರ್ಯಕ್ರಮ ಬೆಂಗಳೂರು, 6 ಜನವರಿ, 2026: ಸೆಮಿಕಂಡಕ್ಟರ್, ಡೀಪ್ಟೆಕ್, ಬಾಹ್ಯಾಕಾಶ ತಂತ್ರಜ್ಞಾನ, ಸ್ಮಾರ್ಟ್ ಸಿಟಿ, ಕೌಶಲ ಮತ್ತು ನಾವೀನ್ಯತೆ-ನೇತೃತ್ವದ ಕೈಗಾರಿಕಾ ಬೆಳವಣಿಗೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರದ ಜೊತೆಗಿನ ಸಹಯೋಗದ ಸಾಧ್ಯತೆಗಳ ಕುರಿತು ಮಲೇಷ್ಯಾದ ಪೆನಾಂಗ್ ರಾಜ್ಯ ಸರ್ಕಾರದ ಉನ್ನತ ಮಟ್ಟದ ನಿಯೋಗವು ಮಂಗಳವಾರ ಇಲ್ಲಿ ಫಲಪ್ರದ ಸಭೆ ನಡೆಸಿತು ಪೆನಾಂಗ್ನ ಉಪಮುಖ್ಯಮಂತ್ರಿ ಜಗದೀಪ್ ಸಿಂಗ್ ದಿಯೊ ಅವರ ನೇತೃತ್ವದಲ್ಲಿನ ಉನ್ನತ ಮಟ್ಟದ ನಿಯೋಗದಲ್ಲಿ ಪೆನಾಂಗ್ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು, ಪೆನಾಂಗ್ ದ್ವೀಪ ನಗರ ಮಂಡಳಿಯ ಪ್ರತಿನಿಧಿಗಳು ಮತ್ತು ಚೆನ್ನೈನ ಮಲೇಷ್ಯಾದ ಕಾನ್ಸುಲೇಟ್ ಜನರಲ್ನ ಅಧಿಕಾರಿಗಳು ಇದ್ದರು ನಿಯೋಗವು ಕರ್ನಾಟಕ ಸರ್ಕಾರದ ಐಟಿ – ಬಿಟಿ ಗೌರವಾನ್ವಿತ ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಎನ್., ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿತು ಸಾಫ್ಟ್ವೇರ್, ಸಂಶೋಧನೆ ಹಾಗೂ ಅಭಿವೃದ್ಧಿ, ಚಿಪ್ ವಿನ್ಯಾಸ, ನವೋದ್ಯಮ, ಡೀಪ್ಟೆಕ್ ಹಾಗೂ ಪ್ರತಿಭಾನ್ವಿತ ತಂತ್ರಜ್ಞರ ಲಭ್ಯತೆ ಮತ್ತಿತರ ವಲಯಗಳಲ್ಲಿನ ಸಹಯೋಗಕ್ಕೆ ಸಂಬಂಧಿಸಿದ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕುವ (ಎಂಒಯು) ನಿಟ್ಟಿನಲ್ಲಿ ಚರ್ಚೆ ಮುಂದುವರೆಸಲು ಪೆನಾಂಗ್ ನಿಯೋಗವು ಆಸಕ್ತಿ ವ್ಯಕ್ತಪಡಿಸಿದೆ. ಸಮಾಲೋಚನೆಗಳನ್ನು ಮುಂದುವರೆಸಲು ಕರ್ನಾಟಕ ರಾಜ್ಯ ಸರ್ಕಾರವೂ ಉತ್ಸುಕತೆ ವ್ಯಕ್ತಪಡಿಸಿದೆ ಸಭೆಯಲ್ಲಿ ಮಾತನಾಡಿದ ಗೌರವಾನ್ವಿತ ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ಅವರು, ʼತಂತ್ರಜ್ಞಾನ ಕ್ಷೇತ್ರಗಳಲ್ಲಿನ ರಾಜ್ಯದ ಪ್ರಗತಿಪಥದ ಮಾದರಿಯು- ಶಿಕ್ಷಣ, ಕೌಶಲ, ನವೋದ್ಯಮ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಉದ್ಯಮ ವಲಯಗಳು ಸಂಘಟಿತ ರೀತಿಯಲ್ಲಿ ಕೆಲಸ ಮಾಡುವುದರ ಮೇಲೆ ನಿರ್ಮಿಸಲ್ಪಟ್ಟಿದೆ. ಹಾರ್ಡ್ವೇರ್ ಮತ್ತು ಸೆಮಿಕಂಡಕ್ಟರ್ ತಯಾರಿಕೆ ವಲಯದಲ್ಲಿ ಸರಿಸಾಟಿಯಿಲ್ಲದ ಸಾಧನೆಯನ್ನು ಪೆನಾಂಗ್ ಸಾಧಿಸಿದೆ. ಕರ್ನಾಟಕವು ಚಿಪ್ ವಿನ್ಯಾಸ, ಸಾಫ್ಟ್ವೇರ್ ಮತ್ತು ಅತ್ಯಾಧುನಿಕ ಎಂಜಿನಿಯರಿಂಗ್ ಪ್ರತಿಭಾನ್ವಿತರ ನೆಲೆಯಾಗಿ ಗಮನಾರ್ಹ ಮುನ್ನಡೆ ಸಾಧಿಸಿದೆ. ಜಾಗತಿಕ ಸೆಮಿಕಂಡಕ್ಟರ್ ಕ್ಷೇತ್ರದ ತಂತ್ರಜ್ಞರ ಅಗತ್ಯವನ್ನು ಕರ್ನಾಟಕ ಮತ್ತು ಪೆನಾಂಗ್ ಜೊತೆಯಾಗಿ ಈಡೇರಿಸಲು ಸಾಧ್ಯವಿದೆʼ ಎಂದು ಹೇಳಿದರು





