ಜೂನ್ 30 ರಂದು ನಡೆಯುವ ಟಿಇಟಿ ಪರೀಕ್ಷೆಗೆ ಅಗತ್ಯ ಸಿದ್ಧತೆ ಕೈಗೊಳ್ಳಿ: ಜಿಲ್ಲಾಧಿಕಾರಿ ಡಾ.ಸುಶೀಲ ಬಿ
ಅಭ್ಯರ್ಥಿಗಳು ನಿಗದಿತ ಸಮಯಕ್ಕೆ ಬಂದರೆ ಮಾತ್ರ ಪರೀಕ್ಷೆ ಕೇಂದ್ರದೊಳಗೆ ಅವಕಾಶ : ಜಿಲ್ಲಾಧಿಕಾರಿ
ಯಾದಗಿರಿ: ಜೂನ್, 25 ( ಕರ್ನಾಟಕ ವಾರ್ತಾ):
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಜೂನ್ 30 ರಂದು 25 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಗೆ ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರೀಕ್ಷೆ ಸಂಬಂಧ ನಿಯೋಜಿತ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲು ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಈ ಪರೀಕ್ಷೆಯ ಮೊದಲ ಪತ್ರಿಕೆಗೆ 4002 ಹಾಗೂ ಮಧ್ಯಾಹ್ನ ಪತ್ರಿಕೆಗೆ 6026 ಸೇರಿ ಒಟ್ಟು 10,028 ಅಭ್ಯರ್ಥಿಗಳು ಹಾಜರಾಗಲಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ಅಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12 ಗಂಟೆವರೆಗೆ ಪೇಪರ್-1 ಮತ್ತು ಮಧ್ಯಾಹ್ನ 2 ರಿಂದ ಸಂಜೆ 4.30 ರವರೆಗೆ ಪೇಪರ್-2 ಪರೀಕ್ಷೆ ನಡೆಯಲಿವೆ. ಪರೀಕ್ಷಾ ಕೇಂದ್ರದ ಆವರಣದೊಳಗೆ ಅಭ್ಯರ್ಥಿಗಳ ಪ್ರವೇಶ, ಬೆಲ್ ಆಗುವ ಸಮಯ, ನಿಗದಿತ ವೇಳಾಪಟ್ಟಿಯಂತೆ ಮತ್ತು ಮಾರ್ಗಸೂಚಿ ಅನ್ವಯ ಪರೀಕ್ಷೆ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಅಭ್ಯರ್ಥಿಗಳು ನಿಗದಿತ ಸಮಯಕ್ಕೆ ಬಂದರೆ ಮಾತ್ರ ಪರೀಕ್ಷೆ ಕೇಂದ್ರದೊಳಗೆ ಅವಕಾಶ ಕಲ್ಪಿಸಲಾಗುತ್ತದೆ. ಸಮಯ ಮೀರಿ ಬಂದರೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಾಗಿ ಸೂಚಿಸಿದರು





