ಕಲಬುರಗಿ,ಜೂ.12(ಕ.ವಾ) ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘ ಸಭೆಯಲ್ಲಿ 2024-25ನೇ ಸಾಲಿಗೆ ಪೀಂಜರಾಪೋಲ್ ಇತರೆ ಗೋಶಾಲೆಗಳ ನೆರವು ಕಾರ್ಯಕ್ರಮದಡಿ ಗೋಶಾಲೆ ನಿರ್ವಹಣೆಗೆ ಸರ್ಕಾರದ ಸಹಾಯಧನ ಕೋರಿದ ಬಂದ 7 ಖಾಸಗಿ ಗೋಶಾಲೆಗಳ ಪ್ರಸ್ತಾವನೆಗಳಿಗೆ ಸಭೆ ಅನುಮೋದನೆ ನೀಡಿತ್ತು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಶು ಸಂಗೋಪನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಎಸ್.ಡಿ.ಅವಂಟಿ ಅವರು ಪ್ರಸಕ್ತ ಸಾಲಿಗೆ ಸರ್ಕಾರದಿಂದ ಗೋಶಾಲೆ ನಿರ್ವಹಣೆಗೆ ನೆರವು ಕೋರಿ ಬಂದ ಪ್ರಸ್ತಾವನೆಗಳನ್ನು ಸಭೆ ಮುಂದಿಟ್ಟರು. ಪ್ರತಿಯೊಂದು ಪ್ರಕರಣಗಳ ಕುರಿತು ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರಿಂದ ಸರ್ಕಾರದ ನಿಯಮಾವಳಿ ಪಾಲಿಸಿರುವ ಬಗ್ಗೆ ಡಿ.ಸಿ.ಅವರು ಖಚಿತಪಡಿಸಿಕೊಂಡ ನಂತರ ಸದರಿ ಗೋಶಾಲೆಗೆ ನೆರವು ನೀಡಲು ಸಭೆ ಸಮ್ಮತಿ ಸೂಚಿಸಿತ್ತು.
ಈ ಸಂದರ್ಭದಲ್ಲಿ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಪ್ರತಿ ಗೋಶಾಲೆ ಸಹಕಾರ ಇಲಾಖೆಯಡಿ ನೊಂದಣಿಯಾಗಬೇಕು. ಪಶುಸಂಗೋಪನೆ ಸಹಾಯಕ ನಿರ್ದೇಶಕರು, ಸಹಕಾರ ಸಂಘಗಳ ನಿಬಂಧಕರು ಭೇಟಿ ನೀಡಿ ಪರಿಶೀಲಿಸಬೇಕು ಎಂದರು.
ಇನ್ನೂ ಬರುವ ಜೂನ್ 17 ರಂದು ಬಕ್ರೀದ್ ಹಬ್ಬ ಆಚರಿಸಲಾಗುತ್ತಿದ್ದು, ಹಬ್ಬ ಶಾಂತಿಯುತ ಅಚರಣೆಗೆ ಪೊಲೀಸ್, ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು ಎಂದರು.
ಸಭೆಯಲ್ಲಿ ಎಸ್.ಪಿ ಅಕ್ಷಯ್ ಹಾಕೈ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಡಿ.ಸಿ.ಪಿ. ಕನಿಕಾ ಸಿಕ್ರಿವಾಲ್ ಸೇರಿದಂತೆ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರುಗಳು ಇದ್ದರು.





