ಸಮುದಾಯ ರಾಜಕೀಯ ಅಧಿಕಾರ ಪಡೆಯಬೇಕು ; ಶ್ರೀ ದೊಡ್ಡೇಂದ್ರ ಮಹಾಸ್ವಾಮಿಗಳು ಹೇಳಿದರು ಕಲಬುರಗಿ,ಸೆ.17(ಕರ್ನಾಟಕ ವಾರ್ತೆ) ವಿರಾಟ ಸ್ವರೂಪವನ್ನು ಹೊಂದಿರುವ ವಿಶ್ವಕರ್ಮನು ದೇವಶಿಲ್ಪಿ ಎಂದೇ ಹೆಸರುವಾಸಿಯಾದವನು. ಇಂತಹ ವಿಶ್ಚಕರ್ಮ ಸಮುದಾಯಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಇಲ್ಲ. ರಾಜಕಿಯ ಅಧಿಕಾರ ಪಡೆದಿದ್ದಲ್ಲಿ ಮಾತ್ರ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸುಲೆಪೇಟ್ ವಿಶ್ವಕರ್ಮ ಏಕದಂಡಗಿ ಮಠದ ಪೂಜ್ಯ ಶ್ರೀ ದೊಡ್ಡೇಂದ್ರ ಮಹಾಸ್ವಾಮಿಗಳು ಹೇಳಿದರು. ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಠಾಭಿಮಾನ ಬಿಟ್ಟು ಮತಾಭಿಮಾನಕ್ಕೆ ನೀವಿಂದಿಲ್ಲಿ ಒಟ್ಟಾಗಿ ಸೇರಿರುವುದು ಸಂತೋಷ. ಈ ಒಗ್ಗಟ್ಟು ಹೀಗೆ ಮುಂದುವರೆಸಿಕೊಂಡು ಹೋಗಬೇಕು. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಮರೆಯದಿರಿ ಎಂದು ಸಮಾಜ ಬಾಂಧವರಿಗೆ ಕಿವಿಮಾತು ಹೇಳಿದ ಅವರು, ಕುಲಬಾಂಧವರು ವಿವಿಧ ರಂಗದಲ್ಲಿದರೂ ರಾಜಕೀಯದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. ರಾಜಕೀಯ ಅಧಿಕಾರ ಪಡೆಯಬೇಕು. ಇನ್ನು ಮಕ್ಕಳಿಗೆ ಗುಣಮಟ್ಟದ. ಶಿಕ್ಷಣ ಕೊಡಿಸುವಲ್ಲಿ ಹೆತ್ತವರು ಹೆಚ್ಚು ಪ್ರಾಮುಖ್ಯತೆ ನೀಡಬೇಕೆಂದು ಆಶೀರ್ವಚನ ನೀಡಿದರು. ಅಫಜಲಪೂರಿನ ಪೂಜ್ಯ ಪ್ರಣವ ನಿರಂಜನ ಮಹಾಸ್ವಾಮಿಗಳು ಮಾತನಾಡಿ, ಹಿಂದೂ ಪುರಾಣಗಳ ಪ್ರಕಾರ ಭಗವಾನ್ ವಿಶ್ವಕರ್ಮನನ್ನು ನಾಲ್ಕು ಕೈಗಳಿಂದ, ದೈವಿಕ ಬಾತುಕೋಳಿಯ ಮೇಲೆ ಸವಾರಿ ಮಾಡಿ, ಅಳತೆಯ ಟೇಪ್, ಮಾಪಕ, ಪುಸ್ತಕ ಮತ್ತು ಮಡಕೆಯನ್ನು ಹಿಡಿದಿರುವಂತೆ ಚಿತ್ರಿಸಲಾಗಿದೆ. ಈ ಚಿಹ್ನೆಗಳು ಬ್ರಹ್ಮಾಂಡದ ಪ್ರಧಾನ ವಾಸ್ತುಶಿಲ್ಪಿಯಾಗಿ ಅವರ ಸ್ಥಾನಮಾನವನ್ನು ಪ್ರತಿನಿಧಿಸುತ್ತವೆ ಎಂದು ಹೇಳಿದರು. ಮುಖಂಡ ಗುಂಡಪ್ಪ ವಿಶ್ವಕರ್ಮ ಸಹ ಮಾತನಾಡಿದರು. ವೇದಿಕೆಯ ಮೇಲೆ ಪೂಜ್ಯರಾದ ಶ್ರೀ ಸುರೇಂದ್ರ ಮಹಾಸ್ವಾಮಿಗಳು, ಶ್ರೀ ದೇವೇಂದ್ರ ಮಹಾಸ್ವಾಮಿ, ಶ್ರೀ ಈರಣ್ಣ ಮುತ್ಯಾ, ಶ್ರೀ ಶರಣ ಶಂಕರಲಿಂಗ ಮಹಾರಾಜರು, ಬೀದರಿನ ಶ್ರೀ ಸಿದ್ದೇಶ್ವರಾನಂದ ಮಹಾಸ್ವಾಮಿಗಳು, ಶ್ರೀ ನಾಗೇಶ್ ಮುತ್ಯಾ, ಶ್ರೀ ಶಿವರಾಜ್ ಶಾಸ್ತ್ರಿಗಳು, ಚುನಾವಣಾ ತಹಶೀಲ್ದಾರ ಪಂಪಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ನಾಶಿ ಸೇರಿದಂತೆ ಇನ್ನಿತರ ವಿಶ್ವಕರ್ಮ ಸಮಾಜದ ಮುಖಂಡರು ಭಾಗವಹಿಸಿದ್ದರು
ಸಮುದಾಯ ರಾಜಕೀಯ ಅಧಿಕಾರ ಪಡೆಯಬೇಕು ; ಶ್ರೀ ದೊಡ್ಡೇಂದ್ರ ಮಹಾಸ್ವಾಮಿಗಳು ಹೇಳಿದರು
ಸಮುದಾಯ ರಾಜಕೀಯ ಅಧಿಕಾರ ಪಡೆಯಬೇಕು ; ಶ್ರೀ ದೊಡ್ಡೇಂದ್ರ ಮಹಾಸ್ವಾಮಿಗಳು ಹೇಳಿದರು





