ವಿಬಿ ಜಿ ರಾಮ್ ಜಿ ವಾಪಸ್ಸು ಪಡೆದು, ನರೇಗಾ ಯೋಜನೆಯನ್ನು ಪುನರ್ ಸ್ಥಾಪಿಸಿ, ಗ್ರಾಮೀಣ ಕೂಲಿ ಕಾರ್ಮಿಕರಿಗೆ ಉದ್ಯೋಗವನ್ನು ಖಾತ್ರಿಪಡಿಸಲು ಆಗ್ರಹಿಸಿ ಪ್ರತಿಭಟನೆ. ಗ್ರಾಮೀಣ ಜನತೆ ಉದ್ಯೋಗಕ್ಕಾಗಿ ತಮ್ಮ ಹಳ್ಳಿಗಳನ್ನು ತೊರೆದು ಪಟ್ಟಣಕ್ಕೆ ವಲಸೆ ಹೋಗುವುದನ್ನು ತಡೆಯಲು 2005ರಲ್ಲಿ ಜಾರಿಯಾದ ಮನರೇಗಾ ಯೋಜನೆ ಗಮನಾರ್ಹ ಪಾತ್ರವಹಿಸಿತ್ತು. ಇಂದು ಅದೇ ಉದ್ಯೋಗ ಖಾತ್ರಿ ಯೋಜನೆಯನ್ನು ವಿಬಿ ಜಿ ರಾಮ್ ಜಿ ಎಂಬ ಹೆಸರಿನೊಂದಿಗೆ ಮೂಲಭೂತ ಬದಲಾವಣೆ ಮಾಡಿ, ಉದ್ಯೋಗ ಖಾತ್ರಿ ಇಲ್ಲದೆ ಗ್ರಾಮೀಣ ಜನತೆಯ ಬದುಕನ್ನೇ ಕಸಿಯಲು ಹೊರಟಿರುವ ನಡೆ ಇದಾಗಿದೆ ಎಂದು ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಯಾದಗಿರಿ ಜಿಲ್ಲಾ ಸಮಿತಿಯು ಖಂಡಿಸುತ್ತದೆ. ಇಂದು ರೈತ ಕೃಷಿಕಾರ್ಮಿಕರ ಬದುಕು ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೃಷಿ ಒಳಸುರಿವುಗಳ ಬೆಲೆ ಏರಿಕೆಯಿಂದಾಗಿ ತತ್ತರಿಸಿ ಹೋಗಿದೆ. ಸಾಲ ಮಾಡಿ ಬೆಳೆದ ಬೆಳೆಗೂ ಸರಿಯಾದ ಬೆಲೆ ನಿಗದಿಯಾಗದೆ, ಪ್ರಾಕೃತಿಕ ವಿಕೋಪದಿಂದಾಗಿ ಬೆಳೆದ ಬೆಳೆಯು ರೈತರಿಗೆ ಸಿಗದೆ, ಪ್ರತಿ ಬಾರಿಯೂ ನಷ್ಟವನ್ನೇ ಎದುರಿಸುತ್ತಿದ್ದಾನೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಗ್ರಾಮೀಣ ಜನತೆಯ ಬದುಕಿಗೆ ಆಸರೆಯಾಗಿರುವ ನರೇಗಾ ಯೋಜನೆಯನ್ನು ರದ್ದುಗೊಳಿಸಿ, ಉದ್ಯೋಗ ಖಾತ್ರಿ ಇಲ್ಲದ ವಿಬಿ ಜಿ ರಾಮ್ ಜಿಯನ್ನು ಜಾರಿಗೊಳಿಸುತ್ತಿರುವುದು ಗ್ರಾಮೀಣ ಬದುಕನ್ನೇ ಸರ್ವನಾಶ ಮಾಡಿದಂತಾಗುತ್ತದೆ. ಪ್ರತಿ ಕೇಂದ್ರ ಬಜೆಟ್ ನಲ್ಲಿ ನರೇಗಾ ಯೋಜನೆಗೆ ಹಣ ಕಡಿತಗೊಳಿಸುತ್ತಾ, ಈಗ ವಿಬಿ ಜಿ ರಾಮ್ ಜಿ ಜಾರಿಗೊಳಿಸುತ್ತಿರುವುದು ಗ್ರಾಮೀಣ ಭಾಗದ ಉದ್ಯೋಗ ಖಾತ್ರಿಗೆ ಕೊಡಲಿ ಪೆಟ್ಟು ನೀಡಿದಂತಾಗುತ್ತದೆ. ದೇಶದ 12 ಕೋಟಿಗೂ ಅಧಿಕ ಜನತೆ ನರೇಗಾ ಯೋಜನೆ ಅಡಿಯಲ್ಲಿ ಬದುಕು ಸಾಗಿಸುವುದಲ್ಲದೆ, ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಕನಿಷ್ಠ ಆರ್ಥಿಕ ಬಲ ನೀಡಿತ್ತು. ಕೃಷಿ ಚಟುವಟಿಕೆ ಇರದ ಸಮಯದಲ್ಲಿ ಹಲವಾರು ಕ್ರಿಯಾ ಯೋಜನೆಗಳ ಮೂಲಕ ಗ್ರಾಮದ ಅಭಿವೃದ್ಧಿ ಕೆಲಸಗಳು ನಡೆಯುತ್ತಿತ್ತು. ಇದರಿಂದ ಹೆಚ್ಚು ಹಳ್ಳಿಗಳನ್ನೇ ಹೊಂದಿರುವ ನಮ್ಮ ದೇಶದಲ್ಲಿ ಗ್ರಾಮೀಣ ಬದುಕು, ತಳಮಟ್ಟದ ಆಡಳಿತವೂ ಖಾತ್ರಿಯಾಗಿತ್ತು. ಆದರೆ ಇದೀಗ ಕೇಂದ್ರ ಸರ್ಕಾರವೇ ಅಖಿಲ ಭಾರತ ಮಟ್ಟದಲ್ಲಿ ಇಡೀ ದೇಶದ ಎಲ್ಲಾ ಯೋಜನೆಗಳಿಗೆ ಕೇಂದ್ರೀಕೃತವಾಗಿ ಯೋಜನೆಗಳನ್ನು ರೂಪಿಸಿ ಗ್ರಾಮ ಮಟ್ಟದಲ್ಲಿ ಅನುಷ್ಠಾನಕ್ಕೆ ತರಲು ಹಣ ಬಿಡುಗಡೆ ಮಾಡುವುದು ಗ್ರಾಮೀಣ ಆಡಳಿತಕ್ಕೆ ಧಕ್ಕೆತಂದಂತಾಗುತ್ತದೆ. ಇದರಿಂದ ಗ್ರಾಮಗಳ ನಿರ್ದಿಷ್ಟ ಅಗತ್ಯಗಳಿಗೆ ಪುರಸ್ಕಾರವಿಲ್ಲದಂತಾಗುತ್ತದೆ. ಅವುಗಳು ಸೊರಗಿ ಹೋಗುತ್ತವೆ. ಗ್ರಾಮ ಪಂಚಾಯಿತಿ ಅದಕ್ಕೆ ಪೂರಕವಾಗಿ ಯೋಜನೆಗಳನ್ನು ರೂಪಿಸಿದರು ಸಹ ಅವುಗಳ ಅನುಷ್ಠಾನಕ್ಕೆ ಹಣವಿಲ್ಲದೆ ಜಾರಿಗೊಳ್ಳುವುದಿಲ್ಲ. ಇದರಿಂದ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆ ಇಲ್ಲದ ಸಮಯದಲ್ಲಿ ಕೆಲಸ ಇಲ್ಲದಂತಾಗಿ ನರೇಗಾ ಯೋಜನೆಯ ಮೂಲ ಆಶಯವನ್ನೇ ಗಾಳಿಗೆ ತೂರಿದಂತಾಗುತ್ತದೆ
ವಿಬಿ ಜಿ ರಾಮ್ ಜಿ ವಾಪಸ್ಸು ಪಡೆದು, ನರೇಗಾ ಯೋಜನೆಯನ್ನು ಪುನರ್ ಸ್ಥಾಪಿಸಲು ಆಗ್ರಹ
ವಿಬಿ ಜಿ ರಾಮ್ ಜಿ ವಾಪಸ್ಸು ಪಡೆದು, ನರೇಗಾ ಯೋಜನೆಯನ್ನು ಪುನರ್ ಸ್ಥಾಪಿಸಲು ಆಗ್ರಹ





