ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆ: ನವೆಂಬರ್ ಅಂತ್ಯಕ್ಕೆ ಜಿಲ್ಲಾವಾರು ಕರಡು ಯೋಜನೆ ಸಲ್ಲಿಸಿ -ಡಿ.ಆರ್.ಪಾಟೀಲ ಕಲಬುರಗಿ,ನ.15(ಕರ್ನಾಟಕ ವಾರ್ತೆ) ಪಂಚಾಯತ್ ರಾಜ್ ವಿಕೇಂದ್ರಿಕರಣ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಗ್ರಾಮಸಭೆ ಮೂಲಕ ಸ್ವೀಕೃತ ಎಲ್ಲಾ ಬೇಡಿಕೆ ಯೋಜನೆಗಳನ್ನು ಇದೇ ನವೆಂಬರ್ ಅಂತ್ಯಕ್ಕೆ ಜಿಲ್ಲಾ ಯೋಜನಾ ಸಮಿತಿ ಸಭೆಯ ಅನುಮೋದನೆಯೊಂದಿಗೆ ರಾಜ್ಯಕ್ಕೆ ಮಾದರಿಯಾಗಿ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳು 2026-27ರ ಕರಡು ಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್.ಪಾಟೀಲ ಹೇಳಿದರು. ಶನಿವಾರ ಇಲ್ಲಿನ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಸಭಾಂಗಣದಲ್ಲಿ ಕಲಬುರಗಿ ವಿಭಾಗ ಮಟ್ಟದ 2026-27 ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾವು ಈಗಾಗಲೆ ಬೆಳಗಾವಿ ವಿಭಾಗದ ಸಭೆ ನಡೆಸಿದ್ದು, ಎರಡನೇ ಸಭೆ ಕಲ್ಯಾಣ ಭಾಗದಲ್ಲಿ ಇಂದಿಲ್ಲಿ ನಡೆಸುತ್ತಿರುವೆ. ಹಿಂದುಳಿದ ಕಲ್ಯಾಣದ ಅಭಿವೃದ್ಧಿಗೆ ಪೂರಕವಾಗಿ ಜನರ ಅಶೋತ್ತರಗಳನ್ನು ಈಡೇರಿಸುವಂತಹ ಮಾದರಿಯಾದ ಕರಡು ಯೋಜನೆ ಈ ಭಾಗದ ಜಿಲ್ಲೆಗಳಿಂದ ನಿರೀಕ್ಷಿಸಲಾಗಿದೆ ಎಂದರು. ಗಾಂಧೀಜಿ ಅವರ ಕಂಡ ಗ್ರಾಮಸ್ವರಾಜ್ ಕನಸು ನನಸು ಮಾಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಅಧಿಕಾರಿಗಳು ಮನಸ್ಸು ಮಾಡಿದಲ್ಲಿ ಇದು ಕಠಿಣವು ಅಲ್ಲ ಎಂದ ಅವರು, ಇಡೀ ರಾಜ್ಯಕ್ಕೆ ಮಾದರಿಯಾಗಿ ಇಲ್ಲಿನ ಹಳ್ಳಿ ಜನರ ಬದುಕು ಹಸನಗೊಳಿಸಲು ಅವರ ಬೇಡಿಕೆ ಅನುಗುಣವಾಗಿ 2026-27ರ ಕರಡು ಯೋಜನೆ ರೂಪಿಸಿ ಸಲ್ಲಿಸಿದಲ್ಲಿ ಮುಂದೆ ಪೆಬ್ರವರಿಯಲ್ಲಿ ಮಂಡಿಸುವ ಆಯವ್ಯಯ ಮುನ್ನೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಆಯವ್ಯಯದಲ್ಲಿ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಈ ನಿಟ್ಟಿನಲ್ಲಿ ಈಗಾಗಲೆ ಸಿ.ಎಂ. ಅವರು ತಳ ಹಂತದಿಂದ ವರದಿ ತೆಗೆದುಕೊಂಡು ಬರಲು ಸೂಚನೆ ನೀಡಿದ್ದಾರೆ ಎಂದರು. ಬಹುತೇಕ ಹಳ್ಳಿಗಳಲ್ಲಿ ಇಂದು ನಾವು ಭೂಮಿ ಖರೀದಿಸಿ ವಸತಿ ಯೋಜನೆ ರೂಪಿಸುತ್ತಿದ್ದೇವೆ. ಆದರೆ ನಿಧನ ಹೊಂದಿದ್ದರೆ ಅಂತ್ಯ ಸಂಸ್ಕಾರಕ್ಕೆ ಸ್ಮಶಾನ ಇಲ್ಲ. ಸ್ಮಶಾನ ಭೂಮಿ ಮಂಜೂರು ಮಾಡುವಂತಹ ಕೆಲಸ ಆದ್ಯತೆ ಮೇಲೆ ಮಾಡಬೇಕು. ನಾವೆಲ್ಲ ಹಳ್ಳಿದಿಂದಲೆ ಬಂದವರಾಗಿದ್ದೇವೆ. ಹಳ್ಳಿ ಜನರ ಸಮಸ್ಯೆ, ನೋವು ನಲಿವನ್ನು ಹತ್ತಿರದಿಂದ ಕಂಡ ನಮಗೆ ಅವರ ಸಂಕಷ್ಟಕ್ಕೆ ಪರಿಹಾರ ನೀಡುವ ಪ್ರಮಾಣಿಕ ಪ್ರಯತ್ನ ನಮ್ಮೆಲ್ಲರಿಂದಾಗಬೇಕಿದೆ. ಹಳ್ಳಿಯಿಂದ ಪಟ್ಟಣಕ್ಕೆ, ಪಟ್ಟಣದಿಂದ ಹೈವೇಗೆ ರಸ್ತೆ ಮಾಡಿದರೆ ಸಾಲದು. ಕೃಷಿಯೆ ಜೀವನಕ್ಕೆ ಆಧಾರವಾಗಿರುವಾಗ ಮನೆಯಿಂದ ಹೊಲಕ್ಕೂ ರಸ್ತೆ ಬೇಕಲ್ವೆ? ಅಧಿಕಾರಿಗಳು, ಇಂಜಿನೀಯರ್ ಗಳು ರಸ್ತೆ ಮಾಡುವಾಗ ಇದನ್ನೆಲ್ಲ ಗಮನಕ್ಕೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಗ್ರಾಮ ಸಭೆ,ವಾರ್ಡ್ ಸಭೆ ನಡೆಸಿ: ಪಂಚಾಯತ್ ರಾಜ್ ಕಾಯ್ದೆಯ ಸೆಕ್ಷನ್ 3ಇ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಿಲ್ಲಾ, ರಾಜ್ಯ, ಕೇಂದ್ರ ವಲಯದ ಎಲ್ಲಾ ವಲಯದ ಕಾರ್ಯಕ್ರಮಗಳನ್ನು, ಯೋಜನೆ ಅನುಷ್ಟಾನಕ್ಕೆ ತರುವ ಮೊದಲು ಮತ್ತು ಫಲಾನುಭವಿಗಳ ಆಯ್ಕೆಗೆ ಮುನ್ನ ಗ್ರಾಮ ಸಭೆಯಲ್ಲಿ ಇದನ್ನು ಚರ್ಚಿಸಿ ನಿರ್ಧರಿಸಬೇಕೆಂದು ಸ್ಪಷ್ಟವಾಗಿ ತಿಳಿಸಿದೆ. ಹೀಗಾಗಿ ಎಲ್ಲಾ ಇಲಾಖೆಯ ಅಧಿಕಾರಿಗಳು ಕಾಯ್ದೆಯನ್ನು ಸ್ಪಷ್ಟವಾಗಿ ಅರಿತು ಕಾರ್ಯನಿರ್ವಹಿಸಬೇಕು. ಗ್ರಾಮ ಸಭೆ , ವಾರ್ಡ್ ಸಭೆ ನಡೆಸಿ ಜನರ ಬೇಡಿಕೆಯಂತೆ ಆದ್ಯತಾವಾರು ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು. ಸಮುದಾಯವನ್ನು ಒಳಗೊಳ್ಳುವಿಕೆ ಖಾತ್ರಿಪಡಿಸಿಕೊಂಡಲ್ಲಿ ಯೋಜನೆ ಕಾರ್ಯಾನುಷ್ಠಾನ ಸುಲೀಸಾಗಲಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 371ಜೆ ಕಾಯ್ದೆಯ ವಿಶೇಷ ಮೀಸಲು ಫಲವಾಗಿ ಕೆ.ಕೆ.ಆರ್.ಡಿ.ಬಿ ಮಂಡಳಿ ಇರುವುದರಿಂದ ಅಭಿವೃದ್ಧಿಯ ಅಂತರ ತುಂಬುವಿಕೆಗೆ ಯಾವುದೇ ಅನುದಾನದ ಸಮಸ್ಯೆ ಇಲ್ಲ. ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕೆಲಸ ಮಾಡಿದಲ್ಲಿ ಇದು ನಿಜ ಅರ್ಥದಲ್ಲಿ ಕಲ್ಯಾಣ ಪ್ರದೇಶವಾಗಲಿದೆ ಎಂದರು. ನಾಲ್ಕನೆಯ ರವಿವಾರ ಶ್ರಮದಾನ ಮಾಡಿ: ಪ್ರತಿ ಮಾಹೆಯ ನಾಲ್ಕನೇ ರವಿವಾರ ರಜಾ ದಿನದಂದು ಎಲ್ಲಾ ಅಧಿಕಾರಿ-ಚುನಾಯಿತ ಪ್ರತಿನಿಧಿಗಳು ಹಳ್ಳಿ, ವಾರ್ಡ್ ಗಳಲ್ಲಿ ಶ್ರಮದಾನ ಮಾಡುವ ಮೂಲಕ ಗ್ರಾಮದ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು. ಸ್ವಚ್ಚ ಪರಿಸರ ಇದ್ದಲ್ಲಿ ಅದು ಆರೋಗ್ಯಕ್ಕೆ ಒಳ್ಳೆಯದು ಮತ್ತು ಮನುಷ್ಯನಲ್ಲಿ ಧನಾತ್ಮಕ ಚಿಂತನೆಗೂ ಅವಕಾಶ ಮಾಡಿಕೊಡುತ್ತದೆ. ಜನರ ಸೇವೆಯೆ ಅಧಿಕಾರಿಗಳಿಗೆ ಪ್ರಥಮ ಗುರಿಯಾಗಿರಬೇಕು ಎಂದು ಡಿ.ರ್.ಪಾಟೀಲ ತಿಳಿಸಿದರು. ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶಿಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಕಡ್ಡಾಯವಾಗಿ ಗ್ರಾಮ ಸಭೆ ನಡೆಸಿ ಜನರ ಅಶೋತ್ತರಗಳಿಗೆ ಸ್ಪಂದಿಸುವ ಯೋಜನೆಗಳು ರೂಪಿಸಬೇಕು. ಆಗ ಮಾತ್ರ ಅದು ಜನಪರ ಆಡಳಿತ ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಶಾಸಕ ಎಂ.ವೈ.ಪಾಟೀಲ ಮಾತನಾಡಿ, ಪಂಚಾಯತಿಯಲ್ಲಿ ಮಹಿಳೆಯರ ಮೀಸಲಾತಿ ನೀಡಲಾಗಿದೆ. ಆದರೆ ಹಳ್ಳಿಯಲ್ಲಿ ಹೆಣ್ಮಕ್ಕಳ ಬದಲಾಗಿ ಅವರ ಪತಿಯವರ ಕಾರುಬಾರು ಹೆಚ್ಚು. ಇದು ಬದಲಾಗಬೇಕಿದೆ. ಗ್ರಾಮ ಪಂಚಾಯತ್ ಅಧ್ಯಕ್ಷರು, ಪಿ.ಡಿ.ಓ ಪರಸ್ಪರ ಸಭೆ ನಡೆಸಿದರೆ ಅದು ಗ್ರಾಮ ಪಂಚಾಯತ್ ಸಭೆಯಾಗುತ್ತಾ? ಎಂದ ಅವರು, ಸರ್ಕಾರ ಅನೇಕ ನೀತಿ, ನಿಯಮಗಳನ್ನು ಜಾರಿಗೊಳಿಸಿದೆ. ಅದರೆ ಪರಿಣಾಮಕಾರಿ ಅನುಷ್ಟಾನವಾಗುತ್ತಿಲ್ಲ. ಹೀಗಾಗಿ ವಿಕೇಂದ್ರಿಕರಣ ವ್ಯವಸ್ಥೆ ಸರಿಯಾಗಿ ಅನುಷ್ಠಾನಗೊಂಡಲ್ಲಿ ಮಾತ್ರ ಹಳ್ಳಿ ಜನರ ಬದುಕು ಸುಧಾರಣೆ ಕಾಣಲು ಸಾಧ್ಯ ಎಂದರು. ಸಭೆಯಲ್ಲಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ ಎಂ.ಎಲ್.ಸಿ. ಬಿ.ಜಿ.ಪಾಟೀಲ, ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ನಲಿನ್ ಅತುಲ್, ಕಲಬುರಗಿ ಡಿ.ಸಿ. ಬಿ.ಫೌಜಿಯಾ ತರನ್ನುಮ್, ಕಲಬುರಗಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಬೀದರ ಸಿ.ಇ.ಓ ಗಿರೀಶ ಡಿ. ಬದೋಲೆ, ಬಳ್ಳಾರಿ ಸಿ.ಇ.ಓ ಎಂ.ಡಿ.ಹರೀಶ್ ಸುಮೈರ್, ರಾಯಚೂರು ಸಿ.ಇ.ಓ ಈಶ್ವರ ಕಾಂಡೂ, ಯಾದಗಿರಿ ಸಿ.ಇ.ಓ ಲವೀಶ್ ಒರಡಿಯಾ, ಕೊಪ್ಪಳ ಸಿ.ಇ.ಓ ವರ್ನಿತ್ ನೇಗಿ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಸೇರಿದಂತೆ ಏಳು ಜಿಲ್ಲೆಗಳ ಅಪರ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ, ಸಿ.ಪಿ.ಓ ಗಳು, ಡಿ.ಯು.ಡಿ.ಸಿ ಯೋಜನಾ ನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು
ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆ
ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆ





