Home Uncategorized ವೃದ್ಧ ಅತ್ತೆ ಕಾಪಾಡಿದ ಸೊಸೆ ಸಾಹಸಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶಂಸೆ

ವೃದ್ಧ ಅತ್ತೆ ಕಾಪಾಡಿದ ಸೊಸೆ ಸಾಹಸಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶಂಸೆ

0
ವೃದ್ಧ ಅತ್ತೆ ಕಾಪಾಡಿದ ಸೊಸೆ ಸಾಹಸಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶಂಸೆ

. * ವೃದ್ಧ ಅತ್ತೆ ಕಾಪಾಡಿದ ಸೊಸೆ ಸಾಹಸಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶಂಸೆ * ಮೈಸೂರಿನಲ್ಲಿ ಚಿರತೆಯಿಂದ ವೃದ್ಧ ಅತ್ತೆ ಪಾರು ಮಾಡಿದ ಸೊಸೆ * ಮುಂದಿನ ವರ್ಷ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡುವ ಭರವಸೆ ಬೆಂಗಳೂರು: ಮೈಸೂರಿನ ಸಿದ್ಧಾರ್ಥನಗರದ ಮನೆಯೊಂದರಲ್ಲಿ ಚಿರತೆ ಮಂಚದಡಿ ಅಡಗಿದ್ದ ವೇಳೆ ಪ್ರಾಣದ ಹಂಗು ತೊರೆದು ವೃದ್ಧ ಅತ್ತೆಯನ್ನು ಸುರಕ್ಷಿತವಾಗಿ ಹೊರಗೆ ಕರೆತಂದ ಸೊಸೆ ಸುಜಾತಾ ಅವರ ಸಾಹಸಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಘಟನೆ ಆಕಸ್ಮಿಕವಾದರೂ, ಅದು ಮಹಿಳೆಯೊಬ್ಬರ ಅಪ್ರತಿಮ ಧೈರ್ಯ ಮತ್ತು ಅತ್ತೆ-ಸೊಸೆಯ ಪವಿತ್ರ ಬಾಂಧವ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಸಚಿವರು ಬಣ್ಣಿಸಿದ್ದಾರೆ. ತಮ್ಮ ಮನೆಯ ಮಂಚದಡಿ ಚಿರತೆ ಅಡಗಿರುವುದು ತಿಳಿಯುತ್ತಿದ್ದಂತೆಯೇ, ಪ್ರಾಣದ ಹಂಗು ತೊರೆದು ಕೊಠಡಿಗೆ ನುಗ್ಗಿ, ವಯಸ್ಸಾದ ಅತ್ತೆಯನ್ನು ಅಪ್ಪಿಕೊಂಡು ಸುರಕ್ಷಿತವಾಗಿ ಹೊರಗೆ ಕರೆತಂದ ಸುಜಾತಾ ಅವರ ಸಾಹಸ ನಿಜಕ್ಕೂ ರೋಮಾಂಚನಕಾರಿ. ಸಾಕ್ಷಾತ್ ಮೃತ್ಯುವಿನ ದವಡೆಯಿಂದ ಅತ್ತೆಯನ್ನು ರಕ್ಷಿಸಿದ ಅವರ ಸಮಯಪ್ರಜ್ಞೆ ಇಡೀ ಮಹಿಳಾ ಕುಲಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದಿದ್ದಾರೆ. ಅತ್ತೆ-ಸೊಸೆಯ ಸಂಬಂಧದ ಬಗ್ಗೆ ಸಮಾಜದಲ್ಲಿರುವ ಹಳೆಯ ಕಲ್ಪನೆಗಳನ್ನು ಅಳಿಸಿ, ಸುಜಾತಾ ಅವರು ಇಂದು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆಯಾಗಿ, ಸುಜಾತಾ ಅವರ ಈ ಅಸಾಧಾರಣ ಶೌರ್ಯವನ್ನು ನಾನು ಮನತುಂಬಿ ಶ್ಲಾಘಿಸುತ್ತೇನೆ. ಅವರ ಈ ಸಾಹಸವನ್ನು ಗೌರವಿಸಲು ಮುಂದಿನ ವರ್ಷದ “ಕಿತ್ತೂರು ರಾಣಿ ಚೆನ್ನಮ್ಮ ಸಾಹಸ ಪ್ರಶಸ್ತಿ” ಗೆ ಅವರ ಹೆಸರನ್ನು ಪರಿಗಣಿಸಲು ನಮ್ಮ ಇಲಾಖೆಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದರು. ಧೈರ್ಯವಂತ ಮಹಿಳೆಯರೇ ಈ ನಾಡಿನ ನಿಜವಾದ ಶಕ್ತಿ. ಸುಜಾತಾ ಅವರ ಈ ಶೌರ್ಯದ ಗಾಥೆ ಮನೆಮನಗಳಿಗೆ ತಲುಪಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here

error: Content is protected !!